ಕನಕದಾಸರು (೧೫೦೮-೧೬೦೬)
ಧಾರವಾಡ ಜಿಲ್ಲೆಯ ಬಾಡ ಕನಕದಾಸರ ಜನ್ಮ ಸ್ಥಳ. ತಂದೆ ಬೀರಪ್ಪ, ತಾಯಿ ಬಚ್ಚಮ್ಮ. ತಿಮ್ಮಪ್ಪ ಎಂಬುದು ಕನಕದಾಸರ ಹುಟ್ಟು ಹೆಸರು. ಪುರಂದರರ ಸಮಕಾಲೀನರಾದುದರಿಂದ ಕನಕದಾಸರ ಕಾಲ ೧೬ನೇ ಶತಮಾನದ ಪೂರ್ವಾರ್ಧ ಎಂದು ಹೇಳಬಹುದು. ನೆಲ ಅಗೆಯುವಾಗ ದ್ರವ್ಯ ಸಿಕ್ಕಿತು. ಆದ್ದರಿಂದ ಆತ ಕನಕನಾಯಕನೆಂದು ಪ್ರಸಿದ್ಧನಾದನು. ಕಾಗಿನೆಲೆ ಆದಿಕೇಶವ ಎಂಬ ಅಂಕಿತದಲ್ಲಿ ಹಾಡುಗಳನ್ನು ಕಾವ್ಯಗಳನ್ನು ರಚಿಸಿ ಕನ್ನಡ ನಾಡು ನುಡಿಯಲ್ಲಿ ಕನಕದಾಸರೆಂದೇ ಹೆಸರಾದರು. ಕನಕದಾಸರು ಭಾವಪೂರ್ಣ ಕೀರ್ತನೆಗಳನ್ನು ರಚಿಸಿರುವರಲ್ಲದೆ ‘ಮೋಹನತರಂಗಿಣಿ, ‘ ನಳಚರಿತ್ರೆ, ‘ಹರಿಭಕ್ತಸಾರ, ‘ರಾಮಧಾನ್ಯ ಚರಿತ್ರೆ ಎಂಬ ಕೃತಿಗಳನ್ನೂ ರಚಿಸಿದ್ದಾರೆ.

ಭಾಮಿನಿ ಷಟ್ಪದಿಯಲ್ಲಿರುವ ‘ನಳಚರಿತ್ರೆ‘ ಮಹಾಭಾರತದಲ್ಲಿ ಉಕ್ತವಾಗಿರುವ ನಳೋಪಾಖ್ಯಾನವನ್ನು ಒಳಗೊಂಡಿದೆ. ನಳ-ದಮಯಂತಿಯರ ಚಿರಂತನ ಪ್ರೇಮದ ಚಿತ್ರಣ ಕಾವ್ಯದಲ್ಲಿ ಹುದುಗಿದೆ. ಸುಲಭ ಶೈಲಿ, ಘನವಾದ ವಸ್ತು, ಹೃದಯ ಸ್ಪರ್ಶಿ ಚಿತ್ರಣಗಳಿಂದ ಈ ಕಾವ್ಯ ಕನ್ನಡಕ್ಕೆ ಅಪೂರ್ವವಾಗಿದೆ.
‘ರಾಮಧಾನ್ಯ ಚರಿತ್ರೆ ಕಾವ್ಯದಲ್ಲಿ ಅಕ್ಕಿಗಿಂತ ರಾಗಿಗೇ ಹಿರಿಮೆ ಎಂದು ಸಾರಿದರು. ದೀನ-ಧನಿಕರ ಅಂತರವನ್ನು ಬಹಳ ವ್ಯಂಗ್ಯವಾಗಿ ಇಲ್ಲಿ ಚಿತ್ರಿಸಲಾಗಿದೆ. ಮೇಲುನೋಟಕ್ಕೆ ರಾಮಾಯಣದಿಂದ ಆರಿಸಿಕೊಂಡ ವಸ್ತುವಿನಂತೆಯೇ ತೋರಿತ್ತದೆ. ಆದರೂ ಇದೊಂದು ಸ್ವತಂತ್ರ ಕಲ್ಪನಾ ವಸ್ತುವುಳ್ಳ ಕೃತಿ.
ಭಕ್ತಿಭಾವಭರಿತ ಶತಕಗ್ರಂಥವೆನ್ನಲಾದ ‘ಹರಿಭಕ್ತಿ ಸಾರ‘ ದಲ್ಲಿ ಪ್ರಮುಖವಾಗಿ ನೀತಿ, ಭಕ್ತಿ, ವೈರಾಗ್ಯಗಳ ಕುರಿತು ವರ್ಣನೆಯಿದೆ. ಕನಕದಾಸರ ತತ್ತ್ವಜ್ಞಾನ ಜೀವನಾದರ್ಶ ಲೋಕನೀತಿಗಳು ಇಲ್ಲಿ ಪ್ರತಿಪಾದಿತವಾಗಿದೆ.
ಕನಕದಾಸರ ಸುಮಾರು ನಾನೂರು ಕೀರ್ತನೆಗಳು ಇದುವರೆಗೆ ದೊರಕಿವೆ. ಪ್ರತಿಯೊಂದು ಕೀರ್ತನೆಯಲ್ಲೂ ಸಮಾಜದರ್ಶನವನ್ನು ಹಿಡಿದಿಡಲಾಗಿದೆ. ತಲ್ಲಣಿಸದಿರು ಕಂಡ್ಯ ತಾಳು ಮನವೆ; ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ; ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ; ಎಲ್ಲಾರು ಮಾಡುವುದು ಹೊಟ್ಟೆಗಾಗಿ-ಗೇಣು ಬಟ್ಟೆಗಾಗಿ; ತೀರ್ಥವನ್ನು ಪಿಡಿದವರೆಲ್ಲ ತಿರುನಾಮಧಾರಿಗಳೆ; ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ; ದೇವಿ ನಮ್ಮ ದ್ಯಾವರು ಬಂದರು ನೋಡಿರೆ-ಮುಂತಾದ ಕೀರ್ತನೆಗಳಲ್ಲಿ ದೈವಭಕ್ತಿ, ಜೀವನದರ್ಶನ, ಲೋಕಾನುಭವ, ಸಮಾಜವಿಮರ್ಶೆ, ಎಲ್ಲವೂ ಕಾವ್ಯತ್ಮಕವಾಗಿ ಹೊರಹೊವುವೆ. ಸಮಾಜದ ಅಂಕುಡೊಂಕುಗಳನ್ನು ಆಡುಮಾತಿನಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಭಕ್ತಿಯ ತತ್ತ್ವವನ್ನು ಕೀರ್ತನೆಗಳ ಮೂಲಕ ಅರಳಿಸಿದ್ದಾರೆ.
ಅದ್ಭುತ ಕಲ್ಪನಾಶಕ್ತಿ, ಸಹಜ ಪ್ರತಿಭೆ, ಭವ್ಯ ಕಲ್ಪನೆ, ಭಾಷಾ ಪ್ರಭುತ್ವಗಳಿಂದ ಕನಕದಾಸರು ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಕವಿಯಾಗಿ, ಸಂತರಾಗಿ, ಜ್ಞಾನಿಯಾಗಿ ಬೆಳಗಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ